ಡಿಮೀಟ್ರಿಯಸ್ (ಸಿಲ್ಯೂಸಿಡ್ ವಂಶದ)

	ಸಿರಿಯದ ಸಿಲ್ಯೂಸಿಡ್ ವಂಶದ ಮೂವರು ದೊರೆಗಳ ಹೆಸರು. 
ಡಿಮೀಟ್ರಿಯಸ್ I : ಕ್ರಿ.ಪೂ. ಸು. 187-150, 4ನೆಯ ಸೆಲ್ಯೂಕಸನ ಮಗ. ರೋಮನ್ ಸಾಮ್ರಾಜ್ಯದೊಡನೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸೆಲ್ಯೂಕಸ್ ಕ್ರಿ.ಪೂ. 160ರಲ್ಲಿ ಡಿಮೀಟ್ರಿಯಸನನ್ನು ಒತ್ತೆಯಾಗಿ ರೋಮನ್ ನಗರಕ್ಕೆ ಕಳುಹಿಸಿದ್ದ. ಅಲ್ಲಿ ಪ್ರಸಿದ್ಧ ಗ್ರೀಕ್ ವಿದ್ವಾಂಸನೂ ಇತಿಹಾಸಕಾರನೂ ಆಗಿದ್ದ ಪಾಲಿಬಿಯಸನಿಗೂ ಡಿಮೀಟ್ರಿಯಸನಿಗೂ ಸ್ನೇಹ ಬೆಳೆಯಿತು. ಕ್ರಿ.ಪೂ. 163ರಲ್ಲಿ ಸಿರಿಯದ ಕ್ಷತ್ರಪ ಮರಣ ಹೊಂದಿದ್ದರಿಂದ ತಾನು ಹಿಂದಿರುಗಿ ಅಧಿಕಾರ ವಹಿಸಿಕೊಳ್ಳಲು ಒಪ್ಪಿಗೆ ನೀಡಬೇಕೆಂದು ಡಿಮೀಟ್ರಿಯಸ್ ರೋಮಿನ ಸೆನೆಟನ್ನು ಪ್ರಾರ್ಥಿಸಿದ. ಆದರೆ ಅವನಿಗೆ ಒಪ್ಪಿಗೆ ದೊರೆಯಲಿಲ್ಲ. ಪಾಲಿಬಿಯಸನ ಸಹಾಯದಿಂದ ಡಿಮೀಟ್ರಿಯಸ್ ರೋಮಿನಿಂದ ತಪ್ಪಿಸಿಕೊಂಡು ತನ್ನ ರಾಜ್ಯಕ್ಕೆ ಹಿಂದಿರುಗಿದ. ಸಿರಿಯದ ಜನರೂ ಸೈನ್ಯದವರೂ ಡಿಮೀಟ್ರಿಯಸನನ್ನು ಆದರದಿಂದ ಸ್ವಾಗತಿಸಿ ಅವನನ್ನು ತಮ್ಮ ರಾಜನೆಂದು ಒಪ್ಪಿಕೊಂಡರು. ಬ್ಯಾಬಿಲೋನಿಯ ಮತ್ತು ಮಿಡಿಯಗಳಲ್ಲಿ ಟಿಮಾರ್ಕಸ್ ಎಂವನು ದೊರೆಯೆಂದು ಸಾರಿಕೊಂಡಿದ್ದನಲ್ಲದೆ ತನ್ನ ದೊರೆತನಕ್ಕೆ ರೋಮ್ ಸೆನಟಿನ ಮನ್ನಣೆಯನ್ನೂ ಪಡೆದಿದ್ದ. ಡಿಮೀಟ್ರಿಯಸ್ ಟಿಮಾರ್ಕಸನ ಮೇಲೆ ಯುದ್ಧ ಮಾಡಿ ಅವನನ್ನು ಸಂಪೂರ್ಣವಾಗಿ ಸೋಲಿಸಿ (ಕ್ರಿ.ಪೂ. 161-160) ಸೋಟರ್ (ವಿಮೋಚಕ) ಎಂಬ ಬಿರುದು ಗಳಿಸಿದ. ರೋಮಿನ ಸೆನೆಟ್ ಆಗ ಡಿಮೀಟ್ರಿಯಸನಿಗೆ ದೊರೆಯೆಂದು ಮನ್ನಣೆ ನೀಡಿತು. ಅನಂತರ ಜುಡೀಯ ಪ್ರದೇಶದಲ್ಲಿ ಯೆಹೂದ್ಯರ ದಂಗೆಯೊಂದು ತಲೆದೋರಿತು. ಪ್ರಾರಂಭದಲ್ಲಿ ಡಿಮೀಟ್ರಿಯಸ್ ದಂಗೆಯನ್ನು ಹತ್ತಿಕ್ಕಿದರೂ ಕ್ರಮೇಣ ಅದು ಮತ್ತೆ ಪ್ರಬಲವಾದಾಗ ಅವರಿಗೆ ಮತೀಯ ಸ್ವಾತಂತ್ರ್ಯ ನೀಡಿ ಆ ಪ್ರದೇಶದಲ್ಲಿ ಸೈನ್ಯವನ್ನಿರಿಸಿ ಅದರ ಮೇಲೆ ಹತೋಟಿ ಇಟ್ಟುಕೊಂಡ. ಡಿಮೀಟ್ರಿಯಸ್ ತನ್ನ ಕೊನೆಗಾಲದಲ್ಲಿ ಪೆರ್ಗಮಮ್ ಮತ್ತು ಈಜಿಪ್ಟಿನ ವಿರೋಧವನ್ನು ಎದುರಿಸಬೇಕಾಯಿತು. ರೋಮನ್ ಸೆನೆಟಿನ ಪ್ರಚೋದನೆಯಿಂದ ಅವರು ಅಲೆಕ್ಸಾಂಡರ್ ಬ್ಯಾಲಸನನ್ನು ಸಿರಿಯ ಸಿಂಹಾಸನಕ್ಕೆ ಹಕ್ಕುದಾರನೆಂದು ಅವನಿಗೆ ಬೆಂಬಲ ನೀಡಿದರು. ಅಲೆಕ್ಸಾಂಡರನೊಡನೆ ವೀರಾವೇಶದಿಂದ ಯುದ್ಧದಲ್ಲಿ ತೊಡಗಿದ್ದಾಗ ಡಿಮೀಟ್ರಿಯಸ್ ಮರಣಹೊಂದಿದ. 

ಡಿಮೀಟ್ರಿಯಸ್ II : 	ಕ್ರಿ.ಪೂ. 161-126 ಅಥವಾ 125. ಒಂದನೆಯ ಡಿಮೀಟ್ರಿಯಸನ ಮಗ. ಕ್ರಿ.ಪೂ. 145-139ರಲ್ಲಿ ದೊರೆಯಾಗಿದ್ದ. ಇವನಿಗೆ ನಿಕೇಟರ್ ಅಥವಾ ವಿಜಯಿ ಎಂಬ ಬಿರುದಿತ್ತು. ಕ್ರಿ.ಪೂ. ಸು. 161ರಲ್ಲಿ ಜನಿಸಿದ ಡಿಮೀಟ್ರಿಯಸ್ ತನ್ನ ತಂದೆಯ ಮರಣಾನಂತರ ಹಲವು ಕಾಲ ತಲೆ ಮರೆಸಿಕೊಂಡಿದ್ದ. ಕ್ರಿ.ಪೂ. 147ರಲ್ಲಿ ಕ್ರೀಟನರಿಂದ ಕೂಡಿದ ಒಂದು ಚಿಕ್ಕ ಸೈನ್ಯದೊಂದಿಗೆ ಸಿರಿಯಕ್ಕೆ ಹಿಂದಿರುಗಿ ಅಲೆಕ್ಸಾಂಡರ್ ಬ್ಯಾಲಸನನ್ನು ಎದುರಿಸಿದ. ಕ್ರಿ.ಪೂ. 145ರ ವೇಳೆಗೆ ಈಜಿಪ್ಟಿನ 4ನೆಯ ಟಾಲಮಿಯ ಸಹಾಯದಿಂದ ಸಿರಿಯದ ಸಿಂಹಾಸನವನ್ನು ಪಡೆದು ದೊರೆಯಾದ. ಅಲೆಕ್ಸಾಂಡರ್ ಯುದ್ಧದಲ್ಲಿ ಮಡಿದ. ಟಾಲಮಿಗೂ ಅದೇ ಗತಿಯೊದಗಿತು. ಇದರಿಂದ ಡಿಮೀಟ್ರಿಯಸನಿಗೆ ಹೊರಗಿನ ಆಕ್ರಮಣಗಳ ಭಯ ತಪ್ಪಿತು. ಆದರೆ ಸಿರಿಯದ ಆಡಳಿತ ದುರ್ಬಲಗೊಂಡು ಆಂತರಿಕ ಕ್ಷೋಭೆಯುಂಟಾಗಿತ್ತು. ಕ್ರಿ.ಪೂ. 140 ಸಿರಿಯಲ್ಲಿ ಅಂತರ್ಯುದ್ಧಗಳು ನಡೆಯುತ್ತಿದ್ದುವು. ಆ ವೇಳೆಗೆ ಪಾರ್ತಿಯನರ ಆಕ್ರಮಣವೂ ಪ್ರಾರಂಭವಾಯಿತು. ಡಿಮೀಟ್ರಿಯಸ್ ಮೊದಲ ಸಲ ಪಾರ್ತಿಯನರನ್ನೂ ಸೋಲಿಸಿ ಬ್ಯಾಬಿಲೋನಿಯದಿಂದ ಓಡಿಸಿದ. ಆದರೆ ಮರುವರ್ಷ ಪಾರ್ತಿಯನರ ಆಕ್ರಮಣ ಮುಂದುವರಿಯಿತು. ಡಿಮೀಟ್ರಿಯಸ್ ಸೋತು ಸೆರೆಸಿಕ್ಕಿದ. ಕ್ರಿ.ಪೂ. 129ರಲ್ಲಿ ಡಿಮೀಟ್ರಿಯಸ್ ಪಾರ್ತಿಯನರಿಂದ ಬಿಡುಗಡೆ ಹೊಂದಿ ಪುನಃ ದೊರೆಯಾದ. ಆದರೆ ಕೆಲವೇ ದಿನಗಳಲ್ಲಿ ಈತ ಕೊಲೆಯಾದ. 

	ಡಿಮೀಟ್ರಿಯಸ್ III : 	ಕ್ರಿ.ಪೂ. 95-88ರಲ್ಲಿ ದೊರೆಯಾಗಿದ್ದವ. ಆ ವೇಳೆಗೆ ಸಿಲ್ಯೂಸಿಡ್ ದೇಶ ಕ್ಷೋಭೆಗೊಳಗಾಗಿತ್ತು. ಇವನ ಕಾಲದಲ್ಲಿ ಸಿಲ್ಯೂಸಿಡ್ ವಂಶದ ಆಡಳಿತದ ಅಂತ್ಯ ಸಮೀಪವಾಗಿತ್ತು. ಪಾರ್ತಿಯನರು ಸಿರಿಯವನ್ನು ಆಕ್ರಮಿಸಿದರು. ಡಿಮೀಟ್ರಿಯಸ್ ಪಾರ್ತಿಯನರ ಬಂಧಿಯಾಗಿ ಸೆರೆಮನೆಯಲ್ಲೇ ಮರಣ ಹೊಂದಿದ.	 
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ